ಬಿದರೆ -
ಭಾರತದ ಕರ್ನಾಟಕ ರಾಜ್ಯದ ಗುಲ್ಬರ್ಗ ವಿಭಾಗಕ್ಕೆ ಸೇರಿದ ಒಂದು ಜಿಲ್ಲೆ, ತಾಲ್ಲೂಕು ಹಾಗೂ ಪಟ್ಟಣ.
ಜಿಲ್ಲೆ: ರಾಜ್ಯದ ಉತ್ತರ ತುದಿಯಲ್ಲಿರುವ ಈ ಜಿಲ್ಲೆಯನ್ನು, ಪೂರ್ವದಲ್ಲಿ ಆಂಧ್ರಪ್ರದೇಶದ ಮೇಡಕ್ ಮತ್ತು ನಿಜಾಮಾಬಾದ್ ಜಿಲ್ಲೆಗಳು. ಉತ್ತರ ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರ ರಾಜ್ಯದ ನಾಂದೇಡ್ ಮತ್ತು ಉಸ್ಮಾನಾಬಾದ್ ಜಿಲ್ಲೆಗಳು, ದಕ್ಷಿಣದಲ್ಲಿ ಗುಲ್ಬರ್ಗ ಜಿಲ್ಲೆಯ ಆಳಂದ, ಗುಲ್ಬರ್ಗ ಮತ್ತು ಚಿಂಚೋಳಿ ತಾಲ್ಲೂಕುಗಳು ಸುತ್ತುವರಿದಿದೆ. ಜಿಲ್ಲೆಯಲ್ಲಿ ಔರಾದ, ಬಿದರೆ, ಭಾಲ್ಕಿ, ಹುಮನಾಬಾದ್ ಮತ್ತು ಬಸವಕಲ್ಯಾಣ ತಾಲ್ಲೂಕುಗಳು, 622 ಗ್ರ್ರಾಮಗಳು ಮತ್ತು 5 ನಗರಗಳು ಇವೆ. ಜಿಲ್ಲೆ 17 30 _ 18 30 ಉತ್ತರ ಅಕ್ಷಾಂಶ ಹಾಗೂ 76(42- 7736ಪೂರ್ವ ರೇಖಾಂಶಗಳ ನಡುವೆ ಹಬ್ಬಿದೆ. ಜಿಲ್ಲೆಯ ವಿಸ್ತೀರ್ಣ 5.451 ಚಕಿಮೀ. ಜಿಲ್ಲೆಯಲ್ಲಿ 7,70,679 ಮಂದಿ ಪುರುಷರು 7,30,695 ಮಂದಿ ಮಹಿಳೆಯರು ಇದ್ದು ಒಟ್ಟು ಜನಸಂಖ್ಯೆ 15,01,374(2001) ಜನಸಾಂದ್ರತೆ ಚ.ಕಿಮೀಗೆ 276 ಇದೆ.

ಬಿದರೆ ಜಿಲ್ಲೆ ದಖನ್ ಪ್ರಸ್ಥಭೂಮಿಯ ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸ ಪ್ರದೇಶಗಳಿಂದ ಕೂಡಿದೆ. ಔರಾದ ಹಾಗೂ ಭಾಲ್ಕಿ ತಾಲ್ಲೂಕುಗಳು ಕಪ್ಪು ಮಣ್ಣಿನ ಪ್ರದೇಶ. ಹುಮನಾಬಾದ, ಬಸವಕಲ್ಯಾಣ ಹಾಗೂ ಬಿದರೆ ತಾಲ್ಲೂಕು ಪ್ರದೇಶಗಳಲ್ಲಿ ಜಂಬುಕಲ್ಲಿನ ಮಿಶ್ರಣವಿರುವ ಭೂಮಿ ಇದೆ. ಈ ಜಿಲ್ಲೆಯ ಯಾವ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ. ಮಾಂಜರಾ ಇಲ್ಲಿಯ ಪ್ರಮುಖ ನದಿ. ಗೋದಾವರಿಯ ಉಪನದಿಯಾಗಿರುವ ಇದು ಜಿಲ್ಲೆಯ ಮಧ್ಯದಲ್ಲಿ ಉಗಮಿಸಿ ಪೂರ್ವಾಭಿಮುಖವಾಗಿ ಭಾಲ್ಕಿ, ಔರಾದ, ಬಿದರೆ ತಾಲ್ಲೂಕುಗಳ ಗಡಿಯಲ್ಲಿ ಸಾಗಿ ಮುಂದೆ ಸ್ವಲ್ಪ ದೂರ ಆಂಧ್ರಪ್ರದೇಶದಿಂದ ಬಿದರೆ ಜಿಲ್ಲೆಯನ್ನು ವಿಂಗಡಿಸುವ ಗಡಿಯಾಗಿಯೂ ಹರಿಯುತ್ತದೆ. ಜಿಲ್ಲೆಯಲ್ಲಿ ಈ ನದಿಯ ಹರಿವಿನ ಉದ್ದ 97 ಕಿಮೀ. ನದಿಯ ಜಲಾನಯನ ಪ್ರದೇಶದ ವಿಸ್ತೀರ್ಣ 1,295 ಚ ಕಿಮೀ. ಕಾರಂಜಾ ಈ ಜಿಲ್ಲೆಯ ಮತ್ತೊಂದು ಮುಖ್ಯ ನದಿ. ಇದು ಭಾಲ್ಕಿ ತಾಲ್ಲೂಕಿನಲ್ಲಿ ವಾಯವ್ಯಾಭಿಮುಖವಾಗಿ ಹರಿದು ಮಾಂಜರಾ ನದಿಯನ್ನು ಕೂಡಿಕೊಳ್ಳುವುದು. ಮುಲ್ಲಾಮಾರಿ ನದಿ ಬಸವಕಲ್ಯಾಣ ತಾಲ್ಲೂಕಿನಲ್ಲಿ ಹುಟ್ಟಿ ಆಗ್ನೇಯಾಭಿಮುಖವಾಗಿ ಹರಿದು ಗುಲ್ಬರ್ಗ ಜಿಲ್ಲೆಯನ್ನು ಪ್ರವೇಶಿಸುವುದು. ಚುಳಕಿ, ಗಂಡೋರಿ, ನಗರವಾಲಾ ಹುಡಗಿ ಹಾಗೂ ಹಳ್ಳಿಖೇಡನಾಲಾ-ಇವು ಚಿಕ್ಕ ನದಿಗಳು. ಜಿಲ್ಲೆಯ ನೈಋತ್ಯದಲ್ಲಿ ಬೆಣ್ಣೆ ತೊರೆ ಜಿಲ್ಲೆಯ ಗಡಿಯನ್ನು ಮುಟ್ಟಿ ಹೋಗುತ್ತದೆ. ಹೆಚ್ಚಿನ ನದಿಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವಾದರೂ ಬೇಸಿಗೆಯಲ್ಲಿ ಬತ್ತಿ ಹೋಗುವುದುಂಟು.

ಸಮುದ್ರ ಮಟ್ಟದಿಂದ ಸರಾಸರಿ 914 ಮೀ ಎತ್ತರದಲ್ಲಿದೆ. ಇಲ್ಲಿಯ ಹವೆ ಆರೋಗ್ಯಕರವಾಗಿದೆ. ಬೇಸಗೆಯಲ್ಲಿ ಉಷ್ಣತೆ ಹೆಚ್ಚು. ಜೂನ್ ನಿಂದ ಅಕ್ಟೋಬರ್ ತನಕ ಮಳೆಗಾಲ, ವಾರ್ಷಿಕ ಸರಾಸರಿ ಮಳೆ 907.5 ಮಿಮೀ.

ಬಿದರೆ ಕೃಷಿ ಪ್ರಧಾನ ಜಿಲ್ಲೆ. 1970-71ನೆಯ ಸಾಲಿನ ಅಂಕೆ ಅಂಶಗಳ ಪ್ರಕಾರ ಇಲ್ಲಿಯ 5,45,000 ಹೆಕ್ಟೇರು ಭೂಪ್ರದೇಶದಲ್ಲಿ ಸುಮಾರು 46,000 ಹೆಕ್ಟೇರು ಸಾಗುವಳಿಗೆ ದೊರೆಯುವ ಭೂಮಿಯಾಗಿದ್ದು ಒಟ್ಟು ಸುಮಾರು 3,35,000 ಹೆಕ್ಟೇರುಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಜಿಲ್ಲೆಯಲ್ಲಿ 1972-73ರಲ್ಲಿ 233.10 ಚ ಕಿಮೀ ಅರಣ್ಯ ಪ್ರದೇಶವಿತ್ತು. 1970-71ರಲ್ಲಿ 16,707 ಹೆಕ್ಟೇರುಗಳಷ್ಟು ನೀರಾವರಿ ಪ್ರದೇಶವಿತ್ತು. ಜಿಲ್ಲೆಯಲ್ಲಿ ಮೂರು ನೀರಾವರಿ ಯೋಜನೆಗಳಾದ ಕಾರಂಜಾ, ಚುಳಕಿನಾಲಾ ಹಾಗೂ ಮುಲ್ಲಾಮಾರಿ ನದಿಗಳಿಗೆ ಅಣೆಕಟ್ಟು ಕಟ್ಟುವ ಯೋಜನೆ ನಡೆದಿದೆ. ಹಳ್ಳಿಖೇಡದ ಹತ್ತಿರ ಕಾರಂಜಾ ನದಿಗೆ ಅಣೆಕಟ್ಟು ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಇದರಿಂದ ಭಾಲ್ಕಿ ಹಾಗೂ ಬಿದರೆ ತಾಲ್ಲೂಕಿನ ಒಟ್ಟು 31,570 ಹೆಕ್ಟೇರುಗಳಿಗೆ ನೀರಾವರಿ ಸೌಲಭ್ಯ ದೊರೆಯುವುದು. ಈ ಜಿಲ್ಲೆಯ ಮುಖ್ಯ ಬೆಳೆ ಜೋಳ. ಸಜ್ಜೆ, ಗೋಧಿ, ಬತ್ತ, ದ್ವಿದಳ ಧಾನ್ಯಗಳು, ಕಬ್ಬು ಮತ್ತು ಹತ್ತಿಯನ್ನೂ ಸುಮಾರು ಪ್ರಮಾಣದಲ್ಲಿ ಬೆಳೆಸುತ್ತಾರೆ. ಜಿಲ್ಲೆಯಲ್ಲಿ ಪಶುಪಾಲನೆಯಿದೆ. ಮತ್ಸ್ಯೋದ್ಯಮ ಅಲ್ಪಪ್ರಮಾಣದಲ್ಲಿದ್ದು ಒಳನಾಡಿನ ಮೀನು ಉತ್ಪಾದನೆಯಿದೆ.

ಈ ಜಿಲ್ಲೆಯಲ್ಲಿ ಬೃಹತ್ ಉದ್ಯಮಾಭಿವೃದ್ಧಿಗೆ ಸೌಕರ್ಯಗಳಿಲ್ಲ. ಇತರ ಸಣ್ಣ ಕೈಗಾರಿಕೆಗಳು ಇವೆ. ಇತ್ತೀಚಿನ ಔದ್ಯಮಿಕ ಯೋಜನೆಗಳಿಂದ ಕೃಷಿ ಉಪಕರಣಗಳ ಕಾರ್ಖಾನೆ, ಗೊಬ್ಬರ ಕಾರ್ಖಾನೆ, ಖಂಡಸಾರಿ ಕಾರ್ಖಾನೆ ನೂಲಿನ ಗಿರಣಿ ಇವುಗಳ ಅಭಿವೃದ್ಧಿ ಸಾಗಿದೆ. ಕೆಲವು ತಾಲ್ಲೂಕುಗಳಲ್ಲಿ ಕುಶಲ ಕೈಗಾರಿಕೆಗಳಲ್ಲಿ ತರಬೇತಿ ನೀಡುವ ಕೇಂದ್ರಗಳು ಸ್ಥಾಪಿತವಾಗಿವೆ. ಬಿದರೆ ಹಾಗೂ ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಕೈಗಾರಿಕಾ ಕೇಂದ್ರಗಳಿವೆ. ಬಡಿಗತನ, ಕಬ್ಬಿಣದ ಕೆಲಸ ಇನ್ನಿತರ ಕಸುಬುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇಲ್ಲಿಯ ಬಿದರೆಯ ವಸ್ತುಗಳ ಕೈಗಾರಿಕೆ ಪ್ರಸಿದ್ಧ. ಕುಶಲ ಕೆಲಸಗಾರರು ತಾಮ್ರ, ಸತುವು ಧಾತುಗಳನ್ನು ಮಿಶ್ರಮಾಡಿ ಸುಂದರ ಮೂರ್ತಿಗಳನ್ನೂ ಕೈಗುಂಡಿಗಳನ್ನೂ ತಟ್ಟೆ, ಹೂಜಿ ಮುಂತಾದ ಅನೇಕ ಆಕರ್ಷಕ ವಸ್ತುಗಳನ್ನೂ ತಯಾರಿಸುತ್ತಾರೆ. ಇವುಗಳ ಮೇಲೆ ಬಂಗಾರದ ಹಾಗೂ ಬೆಳ್ಳಿಯ ಕುಸುರಿ ಕೆಲಸವನ್ನೂ ಮಾಡುತ್ತಾರೆ. ಬಿದರೆಯಲ್ಲಿ ತಯಾರಾದ ಇಂಥ ವಸ್ತುಗಳಿಗೆ ವಿದೇಶಗಳಲ್ಲಿಯೂ ಬೇಡಿಕೆಯಿದೆ. ಈ ಜಿಲ್ಲೆಯಲ್ಲಿ ಆಧುನಿಕ ರೀತಿಯಲ್ಲಿ ನೇಯ್ಗೆಯ ಉದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆಗಳು ನಡೆದಿವೆ. ಜಿಲ್ಲೆಯಾದ್ಯಂತ ಚಿಕ್ಕ ಉದ್ಯಮ ಘಟಕಗಳಿವೆ. ಎಂಜಿನಿಯರಿಂಗ್, ಮುದ್ರಣಾಲಯ, ಕಟ್ಟಿಗೆ ಕೆಲಸ ಆಹಾರ ವಸ್ತುಗಳ ತಯಾರಿಕೆ, ರಾಸಾಯನಿಕ ಕಾರ್ಖಾನೆ, ಸಾಬೂನು ಕಾರ್ಖಾನೆ ಇತ್ಯಾದಿ ಬೆಳೆಯುತ್ತಲಿವೆ. ತೊಗಲಿನ ಮತ್ತು ಉಣ್ಣೆಯ ಅಭಿವೃದ್ಧಿ ಕೇಂದ್ರಗಳಿವೆ. ಸಹಕಾರಿ ಸಕ್ಕರೆ ಕಾರ್ಖಾನೆಯಿದೆ. ವ್ಯಾಪಾರ ವಾಣಿಜ್ಯಕ್ಕೆ ನೆರವಾಗುವ ವಾಣಿಜ್ಯ, ಭೂ ಆಭಿವೃದ್ಧಿ, ಕೇಂದ್ರ ಸಹಕಾರ ಮತ್ತು ಕೈಗಾರಿಕಾ ಸಹಕಾರ ಬ್ಯಾಂಕುಗಳೂ ಅನೇಕ ಸಹಕಾರ ಸಂಘಗಳೂ ನಿಯಂತ್ರಿತ ಮಾರುಕಟ್ಟೆಗಳೂ ಇವೆ.

ಜಿಲ್ಲೆಯಾದ್ಯಂತ ಉತ್ತಮ ಸಾರಿಗೆ ಸಂಪರ್ಕದ ಸೌಲಭ್ಯಗಳಿವೆ. ಔರಾದ ತಾಲ್ಲೂಕಿನಲ್ಲಿ ಕೆಲವೆಡೆ ಪ್ರಯಾಣಕ್ಕೆ ಒಂಟೆಯನ್ನು ಬಳಸುತ್ತಾರೆ. ಪಂಚವಾರ್ಷಿಕ ಯೋಜನೆಗಳಲ್ಲಿ ಈತನಕ 655 ಕಿಮೀ ರಸ್ತೆ ನಿರ್ಮಾಣವಾಗಿದ್ದು 43.19 ಲಕ್ಷ ರೂಪಾಯಿಗಳನ್ನು ಖರ್ಚುಮಾಡಲಾಗಿತ್ತು. ಮುಂಬಯಿ-ಹೈದಾರಾಬಾದ್ ರಾಷ್ಟ್ರೀಯ ಹೆದ್ಧಾರಿ ಹುಮನಾಬಾದ್, ಬಿದರೆ, ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಹಾದುಹೋಗಿದೆ. ಬಿದರೆಯಿಂದ ಸುತ್ತಿನ ತಾಲ್ಲೂಕು ಮತ್ತು ಇತರ ಮುಖ್ಯ ಸ್ಥಳಗಳಿಗೆ ರಸ್ತೆ ಸಂಪರ್ಕವಿದೆ. ಕಾರಂಜಾ ಹಾಗೂ ಮಾಂಜರಾ ನದಿಗಳಿಗೆ ಸೇತುವೆಗಳನ್ನು ಕಟ್ಟಲಾಗಿದ್ದು ಜಿಲ್ಲೆಯ ಸಂಚಾರ ಮಾರ್ಗ ಸುಧಾರಿಸಿದೆ. ದಕ್ಷಿಣ ಮಧ್ಯ ರೈಲ್ವೆಗೆ ಸೇರಿದ ಒಂದು ಮಾರ್ಗ ವಿಕಾರಾಬಾದಿನಿಂದ ಬಿದರೆ, ಭಾಲ್ಕಿ ಮೇಲಿಂದ ಹಾಯ್ದು ಪರಳಿ ವೈಜನಾಥಕ್ಕೆ ಹೋಗುತ್ತದೆ. ಈ ಜಿಲ್ಲೆಯ ರೈಲು ಹಾದಿಯ ಉದ್ದ 89 ಕಿಮೀ. ಬಿದರೆಯಲ್ಲಿ ಒಂದು ವಿಮಾನ ನಿಲ್ದಾಣವಿದೆ. 

1972-73ರ ಅಂಕೆ ಅಂಶಗಳ ಪ್ರಕಾರ 449 ಕಿರಿಯ ಪ್ರಾಥಮಿಕ ಮತ್ತು 170 ಹಿರಿಯ ಪ್ರಾಥಮಿಕ ಶಾಲೆಗಳೂ, 55 ಪ್ರೌಢ ಶಾಲೆಗಳೂ 5 ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳೂ ಒಂದು ತಾಂತ್ರಿಕ ಕಾಲೇಜೂ ಒಂದು ನ್ಯಾಯ ಶಾಸ್ತ್ರ ಕಾಲೇಜುಗಳು ಇದ್ದುವು. ಸರ್ಕಾರಿ ವಿವಿಧೋದ್ದೇಶ ಶಾಲೆ, ನಾರ್ಮಾ ಫ್ರೆಡರಿಕ್ ಶಾಲೆ, ಕರ್ನಾಟಕ ಪ್ರೌಢಶಾಲೆಗಳು ಜಿಲ್ಲೆಯ ಹಳೆಯ ಶಿಕ್ಷಣ ಸಂಸ್ಥೆಗಳು. 1972ರಲ್ಲಿ 4 ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳೂ 17 ಔಷಧಾಲಯಗಳು 8 ಆರೋಗ್ಯ ಕೇಂದ್ರಗಳೂ 9 ಕುಟುಂಬ ಯೋಜನಾ ಕೇಂದ್ರಗಳೂ ಇದ್ದುವು.

ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಐತಿಹಾಸಿಕ ವೈಭವದ ಬಿದರೆ ಮತ್ತು ಬಸವಕಲ್ಯಾಣ (ನೋಡಿ- ಬಸವಕಲ್ಯಾಣ) ವಿಖ್ಯಾತವಾಗಿವೆ. ಔರಾದದಲ್ಲಿರುವ ಅಮರೇಶ್ವರ ದೇವಸ್ಥಾನ ಹುಮುನಾಬಾದಿನ ವೀರಭದ್ರ ದೇವಸ್ಥಾನ ಬಲುಪ್ರಾಚೀನ ಹಾಗೂ ಪವಿತ್ರ ತಾಣಗಳು, ಹುಮನಾಬಾದಿನ ಮಾಣಿಕ ಪ್ರಭುಗಳ ಮಠ, ಕರಕನಳ್ಳಿಯ ಚಿಕ್ಕ ಪ್ರಭುಗಳ ಮಠ, ಬಸವ ಕಲ್ಯಾಣದ ಸದಾನಂದ ಮಠ ಖ್ಯಾತವಾಗಿವೆ. ಬಿದರೆ ಹಾಗೂ ಬಸವಕಲ್ಯಾಣಗಳಲ್ಲಿ ಬಸವ ಮಂಟಪಗಳು ಮತ್ತು ಮಠಗಳು ಇದ್ದು ಅವು ಜಿಲ್ಲೆಯ ಧಾರ್ಮಿಕ ಸಾಂಸ್ಕøತಿಕ ಚಟುವಟಿಕೆಗಳ ಪ್ರಮುಖ ಕೇಂದ್ರಗಳಾಗಿವೆ. ಈ ಜಿಲ್ಲೆಯ ಅನಂತಶಯನ ದೇವರ ಗುಡಿ, ತಾದಲಾಪುರದ ದತ್ತಾನಂದ ಮಠ, ಸಾಧೋ ಘಾಟ್ ವಿಠಲ ಮಂದಿರ, ಖಾನಾಪುರದ ಮಲ್ಲಾರಿ ದೇವಸ್ಥಾನ, ಬಿದರೆ, ಅಷ್ಟೂರ, ಭಾಲ್ಕಿಗಳಲ್ಲಿರುವ ಕೆಲವು ಮುಸ್ಲಿಂ ದರ್ಗಾಗಳೂ ಪ್ರಸಿದ್ಧವಾದುವು.

ಬಿದರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ನವಶಿಲಾಯುಗದ ಕಾಲದಿಂದಲೂ ಜನ ವಸತಿ ಇದ್ದಿತೆಂದು ತೋರುತ್ತದೆ. ಬಿದರೆ ಪಟ್ಟಣದ ಆಸುಪಾಸಿನಲ್ಲೇ ಆ ಕಾಲದ ಶಿಲಾಯುಧಗಳು ದೊರಕಿವೆ. ಇತಿಹಾಸ ಕಾಲದಲ್ಲಿ ಈ ಜಿಲ್ಲೆ ಬಾದಾಮಿಯ ಚಾಳುಕ್ಯರು, ರಾಷ್ಟ್ರಕೂಟರು ಮತ್ತು ಮುಂದೆ ಕಲ್ಯಾಣದ ಚಾಳುಕ್ಯರ ವಶದಲ್ಲಿತ್ತು. ಚಾಳುಕ್ಯರ ರಾಜಧಾನಿ ಇದ್ದುದು ಬಸವ ಕಲ್ಯಾಣದಲ್ಲಿ. ಮುಂದೆ ದೇವಗಿರಿಯ ಯಾದವರು, ಕಾಕತೀಯರು ಸ್ವಲ್ಪ ಕಾಲ ದೆಹಲಿಯ ಸುಲ್ತಾನರು ಇವರ ವಶದಲ್ಲಿದ್ದ ಜಿಲ್ಲೆ ಬಹಮನೀ ರಾಜ್ಯ ಸ್ಥಾಪನೆಯಾಗುತ್ತಿದ್ದಂತೆ ಅದರ ಕಕ್ಷೆಗೆ ಸೇರಿತು. 1424ರಲ್ಲಿ ಬಿದರೆಯೇ ಬಹಮನೀ ರಾಜ್ಯದ ರಾಜಧಾನಿಯಾಗಿ ಬರೀದ್ ಶಾಹೀ ಆಳ್ವಿಕೆಯ ಕಾಲದಲ್ಲಿ ಹಾಗೇ ಮುಂದುವರಿಯಿತು. 1619ರ ಹೊತ್ತಿಗೆ ಈ ಪ್ರದೇಶ ಆದಿಲ್‍ಶಾಹಿಗಳಿಗೆ ಸೇರಿತು. 1656ರಲ್ಲಿ ಔರಂಗಜೇಬ್ ಈ ಪ್ರದೇಶವನ್ನು ಮುಗಲ್ ಸಾಮ್ರಾಜ್ಯಕ್ಕೆ ಸೇರಿಸಿದ. 1724ರಿಂದ ಹೈದರಾಬಾದಿನ ನಿಜಾಮರ ಮಶಕ್ಕೆ ಬಂತು. 1905ರಲ್ಲಿ ಈ ಜಿಲ್ಲೆ ಆ ರಾಜ್ಯದ ಗುಲ್ಬರ್ಗ ಸುಬಾಕ್ಕೆ ಸೇರಿತು. ಹೈದರಾಬಾದು ಸಂಸ್ಥಾನ ಭಾರತದಲ್ಲಿ ವಿಲೀನಗೊಂಡ ಅನಂತರ ಹೈದರಾಬಾದು ರಾಜ್ಯದಲ್ಲಿ ಇತ್ತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆ ಆದಾಗ, ಆ ಜಿಲ್ಲೆಯ ಬಿದರೆ, ಹುಮನಾಬಾದ್, ಔರಾದ ಮತ್ತು ಭಾಲ್ಕಿ ತಾಲ್ಲೂಕುಗಳು ಮಾತ್ರ ಕರ್ನಾಟಕಕ್ಕೆ ಸೇರಿದುವು.

ತಾಲ್ಲೂಕು: ಜಿಲ್ಲೆಯ ಪೂರ್ವಭಾಗದಲ್ಲಿರುವ ಈ ತಾಲ್ಲೂಕು ಪಶ್ಚಿಮದಲ್ಲಿ ಭಾಲ್ಕಿ, ದಕ್ಷಿಣ ಮತ್ತು ನೈಋತ್ಯದಲ್ಲಿ ಹುಮನಾಬಾದ. ಉತ್ತರಲ್ಲಿ ಔರಾದ ತಾಲ್ಲೂಕುಗಳಿಂದ ಪೂರ್ವದಲ್ಲಿ ಆಂಧ್ರ ಪ್ರದೇಶದ ನಿಜಾಮಾಬಾದ್ ಜಿಲ್ಲೆಯಿಂದ ಸುತ್ತುವರೆದಿದೆ. ತಾಲ್ಲೂಕಿನಲ್ಲಿ ಉತ್ತರ ಮತ್ತು ದಕ್ಷಿಣ ಬಿದರೆ, ಜಾನವಾಡ, ಕಮಠಾಣ, ಬಾಗದಳ ಮತ್ತು ಮನಹಳ್ಳಿ ಸರ್ಕಲ್‍ಗಳಿದ್ದು ಒಟ್ಟು 150 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 925.3 ಚಕಿಮೀ. ಈ ತಾಲ್ಲೂಕಿನಲ್ಲಿ 2,09,094 ಮಂದಿ ಪುರುಷರು 1,95,823 ಮಂದಿ ಮಹಿಳೆಯರು ಇದ್ದು ಒಟ್ಟು ಜನಸಂಖ್ಯೆ 4,04,917 (2001).

ಈ ತಾಲ್ಲೂಕಿನ ಹೆಚ್ಚು ಭಾಗ ಜಂಬುಕಲ್ಲಿನ ಮೈದಾನ ಪ್ರದೇಶ. ತಾಲ್ಲೂಕಿನ ಉತ್ತರದಲ್ಲಿ ಮಾಂಜರಾನದಿ ಪೂರ್ವಾಭಿಮುಖವಾಗಿ ಹರಿದು ಔರಾದ ತಾಲ್ಲೂಕಿನಿಂದ ಬಿದರೆ ತಾಲ್ಲೂಕನ್ನು ವಿಂಗಡಿಸಿದೆ. ತಾಲ್ಲೂಕಿನ ಅಂತರ್ಜಲ ಸಂಪತ್ತು ಗಮನಾರ್ಹವಾಗಿದೆ. ಸರಾಸರಿ ವಾರ್ಷಿಕ ಮಳೆ 907.5 ಮಿಮೀ. 722 ಹೆಕ್ಟೇರು ಅರಣ್ಯ ಪ್ರದೇಶವಿದೆ. ಜೋಳ, ಕಡಲೆ, ಸೇಂಗಾ, ಕಬ್ಬು, ತೊಗರಿ-ಇವು ಮುಖ್ಯ ಬೆಳೆಗಳು.

ಬಿದರೆ ತಾಲ್ಲೂಕಿನಲ್ಲಿ 1976ರಲ್ಲಿ 111 ಸಣ್ಣ ಪ್ರಮಾಣದ ಕಾರ್ಖಾನೆಗಳಿದ್ದು 6 ರಾಸಾಯನಿಕ, 18 ತಾಂತ್ರಿಕ, 5 ಖಂಡಸಾರಿ ಘಟಕಗಳು, 50 ಕೈಮಗ್ಗಗಳು, 18 ಬಿದರೀ ವಸ್ತು ತಯಾರಿಕಾ ಘಟಕಗಳು ಇದ್ದುವು. 7 ವಾಣಿಜ್ಯ ಬ್ಯಾಂಕುಗಳು, 6 ಸಹಕಾರಿ ಬ್ಯಾಂಕುಗಳು, 1 ಭೂ ಅಭಿವೃದ್ಧಿ ಬ್ಯಾಂಕು ಮತ್ತು ನಿಯಂತ್ರಿತ ಮಾರುಕಟ್ಟೆ ಇದ್ದುವು. ತಾಲ್ಲೂಕಿನಲ್ಲಿ ಉತ್ತಮ ಮಾರ್ಗಗಳಿವೆ. ಹೈದರಾಬಾದ್-ಸೊಲ್ಲಾಪುರ ಮತ್ತು ಹೈದರಾಬಾದ್-ನಾಂದೇಡ್ ಹೆದ್ದಾರಿಗಳು ಇಲ್ಲಿಯ ಮೂಲಕ ಸಾಗಿವೆ. ಜಿಲ್ಲೆಯ ಎಲ್ಲ ಕಡೆಗೂ ಮೋಟಾರು ರಸ್ತೆ ಸಂಪರ್ಕವಿದೆ. ವಿಕಾರಾಬಾದ್-ಪರಳಿ ವೈಜನಾಥ ರೈಲುಮಾರ್ಗ ಈ ತಾಲ್ಲೂಕಿನ ಮುಖಾಂತರ ಹಾದು ಹೋಗುತ್ತದೆ. ಅಂಚೆ, ವಿದ್ಯುತ್, ದೂರವಾಣಿ ಮುಂತಾದವುಗಳ ಸೌಕರ್ಯವಿದೆ; ಶಾಲಾ ಕಾಲೇಜುಗಳಿವೆ.

ನಾನಕ ಝರಾದ ಗುರುನಾನಕರ ಉತ್ಸವ, ಝರಣಿ ನರಸಿಂಹ ಕ್ಷೇತ್ರದ ನರಸಿಂಹ ಜಯಂತಿ, ಶಿವರಾತ್ರಿಯ ದಿವಸ ಪಾಪನಾಶಿನಿ ದೇವಾಲಯದಲ್ಲಿ ಜರುಗುವ ಮಹಾ ದೇವ ಜಯಂತಿ ಇಲ್ಲಿಯ ಪ್ರಸಿದ್ಧ ಉತ್ಸವಗಳು. ತಾದಲಾಪುರದ ದತ್ತಾನಂದ ಮಠ ಆನಂದ ಸಂಪ್ರದಾಯಕ್ಕೆ ಸೇರಿದ್ದು. ಈ ದೇವಸ್ಥಾನ ಹಿಂದು ಮುಸ್ಲಿಂ ಬಾಂಧವ್ಯದ ಸಂಕೇತವಾಗಿದೆ.

ಪಟ್ಟಣ: ಜಿಲ್ಲೆ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಮತ್ತು ಮುಖ್ಯ ಪಟ್ಟಣ ಬಿದರೆ. ಇದರ ಹೆಸರು ಬಿದರೆ, ಮಹಮ್ಮದಾಬಾದ್-ಬಿದರೆ, ಎಂದೂ ಬಳಕೆಯಲ್ಲಿದೆ. ಬೆಂಗಳೂರಿನ ಉತ್ತರಕ್ಕೆ 670ಕಿಮೀ ದೂರದಲ್ಲೂ ಗುಲ್ಬರ್ಗದ ಈಶಾನ್ಯಕ್ಕೆ 122 ಕಿಮೀ ದೂರದಲ್ಲೂ ಇರುವ ಪಟ್ಟಣವಿದು. ಇದು ಪುರಸಭಾಡಳಿತಕ್ಕೆ ಒಳಪಟ್ಟಿದೆ. ಜನಸಂಖ್ಯೆ ಪಟ್ಟಣದಲ್ಲಿ 89,715 ಮಂದಿ ಪುರುಷರು, 82,583 ಮಂದಿ ಮಹಿಳೆಯರು ಇದ್ದು ಒಟ್ಟು 1,72,298 ಮಂದಿ ಇದ್ದಾರೆ (2001)

ಬಿದರೆ ಸಮುದ್ರ ಮಟ್ಟದಿಂದ 644 ಮೀ ಎತ್ತರದ ಪ್ರಸ್ಥಭೂಮಿಯ ಪ್ರದೇಶದಲ್ಲಿದ್ದು ಇಲ್ಲಿಯ ಹವಾಗುಣ ವರ್ಷಪೂರ್ತ ಹಿತಕರವಾಗಿರುತ್ತದೆ. ಬೇಸಗೆಯಲ್ಲಿ ಮಾತ್ರ ಸ್ವಲ್ಪ ಸೆಖೆ ಹೆಚ್ಚು. ಈ ಪಟ್ಟಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳೂ ಅಂಚೆ-ತಂತಿ-ವಿದ್ಯುತ್-ದೂರವಾಣಿ ಸೌಲಭ್ಯಗಳೂ ರಕ್ಷಿತ ಕುಡಿಯುವ ನೀರು ಸರಬರಾಜು, ಆಸ್ಪತ್ರೆ, ಒಂದು ಕಲಾ ಮತ್ತು ವಿಜ್ಞಾನ ಕಾಲೇಜು, ಒಂದು ಪಾಲಿಟೆಕ್ನಿಕ್, 6 ಪ್ರೌಢಶಾಲೆಗಳು ಇವೆ. ಇಲ್ಲಿ ವಾಯುಸೇನೆಯ ವಿಮಾನ ಚಾಲಕರ ತರಬೇತಿ ಕೇಂದ್ರ ಸಹ ಇದೆ. ಇದು ವ್ಯಾಪಾರ ವಾಣಿಜ್ಯ ಕೇಂದ್ರವಾಗಿರುವುದರಿಂದ ಬ್ಯಾಂಕುಗಳು, ನಿಯಂತ್ರಿತ ಮಾರುಕಟ್ಟೆ ಮುಂತಾದವುಗಳಿವೆ. ಇಲ್ಲಿ ಆಲಿವ್ ಎಣ್ಣೆ ತಯಾರಿಸುವ ಉದ್ಯಮ ಉಂಟು. ಬೆಲ್ಲ, ಸೇಂಗಾ ಮತ್ತು ಬಿದರೀ ವಸ್ತುಗಳು ಇಲ್ಲಿಂದ ರಫ್ತಾಗುತ್ತವೆ. ಬಿದರಿಗೆ ಹೈದರಾಬಾದ್, ನಾಂದೇಡ್, ಗುಲ್ಬರ್ಗಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ಇದು ವಿಕಾರಾಬಾದ್-ಪರಳಿ ವೈಜನಾಥ ರೈಲುಮಾರ್ಗದ ಮುಖ್ಯ ನಿಲ್ದಾಣಗಳಲ್ಲೊಂದು. ಬಿದರೆಯ ವಿಮಾನ ನಿಲ್ದಾಣ ರಕ್ಷಣ ಇಲಾಖೆಯ ವಶದಲ್ಲಿದೆ.

ಎತ್ತರವಾದ ಪ್ರಸ್ಥಭೂಮಿಯ ಮೇಲಿದ್ದು ಸುತ್ತಮುತ್ತಲ ಪ್ರದೇಶಗಳಿಗಿಂತ ಹಿತಕರವಾದ ಹವೆಯಿಂದ ಕೂಡಿ ಹಸಿರು ಗಿಡಮರಗಳಿಂದಾವೃತವಾಗಿದ್ದ ಈ ಸ್ಥಳಕ್ಕೆ ಬಹಳ ಹಿಂದಿನಿಂದಲೂ ಪ್ರಮುಖ್ಯ ದೊರೆತಿದ್ದುದು ಸ್ವಾಭಾವಿಕ. ಬಿದರೆ ಪ್ರಾಚೀನವಾದ ಪಟ್ಟಣ. ಇತಿಹಾಸಪ್ರಸಿದ್ಧ ಸ್ಥಳ. ಮಹಾಭಾರತದ ಕಾಲಕ್ಕೆ ಇದು ವಿದುರ ನಗರವೆಂದು ಪ್ರಸಿದ್ಧಿ ಪಡೆದಿತ್ತೆಂದೂ ನಳ-ದಮಯಂತಿಯರ ಪ್ರಣಯದ ಉದ್ಯಾನವೆಂದೂ ಪ್ರತೀತಿ. ರಾಜಾ ಭೀಮಸೇನನ ರಾಜಧಾನಿ ಇದೇ ಆಗಿತ್ತೆಂದು ಊಹೆ. ಇದಕ್ಕೆ ಬಿದರೂರುಪುರವೆಂತಲೂ ಕರೆದುದ್ದುಂಟು. ಬರಬರುತ್ತ ಬಿದರೆ ಅನೇಕ ಹೆಸರುಗಳನ್ನು ಹೊಂದಿ ಇಸ್ಲಾಮೀ ಸುಲ್ತಾನರ ಆಳ್ವಿಕೆಯಲ್ಲಿ ಅಹಮ್ಮದಾಬಾದ್-ಬಿದರೆ ಎಂದೂ ಹೆಸರುಗಳಿಸಿದೆ. ಚಾರಿತ್ರಿಕವಾಗಿ ಈ ಪಟ್ಟಣದಲ್ಲಿಯೇ ದೊರಕಿರುವ ಕೆಲವು ನವಶಿಲಾಯುಗದ ಆಯುಧಗಳು ಈ ಪಟ್ಟಣದ ಪ್ರಾಚೀನತೆಯನ್ನು ಸೂಚಿಸುತ್ತವೆ. ಕಲ್ಯಾಣದ ಚಾಳುಕ್ಯರ ಕಾಲದಿಂದಲೂ ಇದು ತಕ್ಕಷ್ಟು ಪ್ರಸಿದ್ಧವಾಗಿತ್ತೆಂದು ಈ ಊರಿನಲ್ಲಿಯೂ ಸುತ್ತ ಮುತ್ತಲೂ ದೊರೆತಿರುವ ಅನೇಕ ಚಾಳುಕ್ಯ ರೀತಿಯ ಶಿಲ್ಪ ಮತ್ತು ಶಾಸನಗಳಿಂದ ವ್ಯಕ್ತವಾಗುತ್ತದೆ. ಚಾಳುಕ್ಯರ ಬಲ ಕುಗ್ಗಿದ ಮೇಲೆ ವಾರಂಗಲ್ಲಿನ ಕಾಕತೀಯರು ಇದರ ಮೇಲೆ ಆಧಿಪತ್ಯ ಹೊಂದಿದ್ದರು. ಮುಹಮ್ಮದ್-ಬಿನ್-ತುಗಲಕ್ ಕಾಕತೀಯರ ಮೇಲೆ ದಂಡೆತ್ತಿ ಬಂದಾಗ ಬಿದರೆಯನ್ನು ಮುತ್ತಿ (ಸು. 1325) ಅದನ್ನು ಗೆದ್ದುದಾಗಿ ತಿಳಿದು ಬರುತ್ತದೆ. ಇದಕ್ಕೆ ಆಗಲೇ ಒಂದು ಬಲವಾದ ಕೋಟೆಯಿತ್ತು. ಇದನ್ನು ವಶಪಡಿಸಿಕೊಳ್ಳಲು ತುಗಲಕ್ ಹೆಚ್ಚು ಶ್ರಮ ಪಡಬೇಕಾಯಿತು. ಮುಂದೆ ಬಿದರೆ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿತು. ಆ ಹಿಂದಿನ ಕಾಲದ ದೇವಾಲಯಗಳು, ಬಸದಿಗಳು ಮುಂತಾದವುಗಳ ಕುರುಹುಗಳನ್ನು ಇಲ್ಲಿ ದೊರೆಯುವ ಶಿಲ್ಪದ ತುಣುಕುಗಳಿಂದ ಮಾತ್ರ ಗುರುತಿಸಬಹುದು. ಇಲ್ಲಿದ್ದ ಕೋಟೆ ಕೂಡ ಮುಂದೆ ಬಹಮನೀ ಸುಲ್ತಾನರು ಕಟ್ಟಿಸಿದ ವಿಸ್ತಾರವಾದ ಕೋಟೆಯೊಳಗೆ ಸೇರಿ ಹೋಯಿತು.

1341ರಲ್ಲಿ ಮಹಮ್ಮದ್-ಬಿನ್-ತುಗಲಕನ ಅಧೀನದಲ್ಲಿ ನಸ್ರತ್‍ಖಾನನು ಬಿದರೆಯಿಂದ ಆಳತೊಡಗಿದ. ಆದರೆ 1345ರಲ್ಲಿ ಅವನು ದಂಗೆಯೆದ್ದ. ಅವನನ್ನು ಅಡಗಿಸಲು ಬಂದ ಅಮೀರ್ ಆಲಿ ತಾನೇ ಗುಲ್ಬರ್ಗ, ಬಿದರೆಗಳನ್ನು ಗೆದ್ದು ಆಳಲಾರಂಭಿಸಿದ. ಕುತ್ಲೂಖಾನನು ಇವನನ್ನು ಸೋಲಿಸಿ ಸೆರೆಹಿಡಿದರೂ ಮುಂದೆ 1347ರಲ್ಲಿ ಜಫರ್‍ಖಾನನು ತುಗಲಕನ ಸೈನ್ಯವನ್ನು ಸೋಲಿಸಿ ದಖನ್ನಿಗೆ ತಾನೇ ಸ್ವತಂತ್ರ ರಾಜನಾಗಿ ಆಳತೊಡಗಿದ. ಅವನು ತನ್ನ ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದಾಗ ಬಿದರೆ ಒಂದು ಪ್ರಾಂತ್ಯದ ಮುಖ್ಯಪಟ್ಟಣವಾಗಿ ಅಭಿವೃದ್ದಿ ಹೊಂದತೊಡಗಿತು. ಮೊದಲು ಆಳಿದ ಬಹಮನೀ ಅರಸರಕಾಲದಲ್ಲಿ ಬೆಳೆಯುತ್ತ ಹೋದ ಈ ಊರು ದಕ್ಷಿಣದ ದೊಡ್ಡ ನಗರಗಳಲ್ಲಿ ಒಂದೆಂದು ಖ್ಯಾತಿ ಪಡೆಯಿತು. ಇಮ್ಮಡಿ ಮಹಮ್ಮದ್ ಷಾ ಇಲ್ಲಿ ಶಾಲೆಗಳನ್ನು ತೆರೆದಿದ್ದ. ಇಲ್ಲಿಯ ಕೋಟೆ ಕೊತ್ತಲಗಳನ್ನು ಬಲಪಡಿಸಿದ. ಬಹಮನೀ ರಾಜ್ಯದ ಏಳನೆಯ ದೊರೆ ಷಂಸುದ್ದೀನನನ್ನು ಇಲ್ಲಿಯೇ ಬಂಧನದಲ್ಲಿಡಲಾಗಿತ್ತು. 1424ರಲ್ಲಿ ಬಹಮನೀ ಅರಸ ಅಹ್ಮದ್ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ ಬಿದರೆಗೆ ಬದಲಾಯಿಸಿದ. ಅಂದಿನಿಂದ ಬಿದರೆಯ ಸ್ವರೂಪ ಬದಲಾಯಿತು. ವಿಸ್ತಾರ ರಾಜ್ಯದ ರಾಜಧಾನಿಯಾದ ಮೇಲೆ ಬಲವಾದ ಕೋಟೆ ನಿರ್ಮಿಸಿ ಫಿರಂಗಿಗಳನ್ನಳವಡಿಸಲಾಯಿತು. ಸುಲ್ತಾನ ಕೋಟೆಯಲ್ಲಿ ಒಂದು ದೊಡ್ಡ ಅರಮನೆ ಕಟ್ಟಿಸಿದ. ಇತರ ಸರದಾರರೂ ತಮತಮಗೆ ಭವ್ಯವಾದ ಕಟ್ಟಡಗಳನ್ನು ನಿರ್ಮಿಸಿಕೊಂಡರು. ಅನೇಕ ಮಸೀದಿಗಳು ಇತ್ಯಾದಿ ಬೃಹತ್ ಕಟ್ಟಡಗಳು ನಿರ್ಮಾಣವಾದುವು. 15ನೆಯ ಶತಮಾನದ ಪ್ರಥಮಾರ್ಧದಲ್ಲಿ ಬಿದರೆ ಹಲವು ದಾಳಿಗಳಿಗೆ ಈಡಾಗಿತ್ತು. 1460-61ರ ಸುಮಾರಿನಲ್ಲಿ ಮಾಳವದ ಮಹಮ್ಮದ್ ಖಿಲ್ಜಿ ಬಿದರೆಯನ್ನು ಮುತ್ತಿ ಕೆಲಕಾಲ ವಶಪಡಿಸಿಕೊಂಡಿದ್ದು ಇಲ್ಲಿಯ ಹಲವು ಕಟ್ಟಡಗಳನ್ನು ನಾಶಮಾಡಿದ. ಆದರೆ ಇದನ್ನು ನಿಜಾಂ ಷಾ (1461-63) ಪುನರ್ನಿರ್ಮಿಸಿದ. ಬಹಮನೀಯರ ಅನಂತರವೂ ಈ ಪಟ್ಟಣ ಬರೀದ್ ಶಾಹೀಗಳ ಆಳ್ವಿಕೆಯಲ್ಲಿ ರಾಜಧಾನಿಯಾಗಿಯೇ ಮೆರೆಯಿತು. 1619ರಲ್ಲಿ ಬಿದರೆ ಆದಿಲ್‍ಶಾಹಿಗಳ ವಶವಾಯಿತಾದರೂ ಪಟ್ಟಣದ ಪ್ರಾಮುಖ್ಯ ಅಷ್ಟೇನೂ ಇಳಿಯಲಿಲ್ಲ. ಇಬ್ರಾಹಿಂ ಆದಿಲ್ ಷಾನ ಕಾಲದಲ್ಲಿ ಅವನ ಅಧಿಕಾರಿಯಾಗಿದ್ದ ಮಲ್ಲಿಕ್ ಮರ್ಜಾನನು ಬಿದರೆಯ ಕೋಟೆ ಮತ್ತು ಅರಮನೆಗಳನ್ನು ದುರಸ್ತುಪಡಿಸಿದ. 1656ರಲ್ಲಿ ಔರಂಗ್‍ಜೇಬ್ ಇಲ್ಲಿಗೆ ಮುತ್ತಿಗೆ ಹಾಕಿ ಗೆದ್ದು ಇದನ್ನು ಮುಗಲ್ ಚಕ್ರಾಧಿಪತ್ಯಕ್ಕೆ ಸೇರಿಸಿಕೊಂಡ. ಆಗ ಬಿದರೆನ ಹೆಸರು ಜಾಫರಾಬಾದ್ ಎಂದಾಯಿತು. ಅನಂತರ ಹಲವು ಮುಗಲ್ ಅಧಿಕಾರಿಗಳು ಇಲ್ಲಿ ಆಡಳಿತ ನಡೆಸಿದರು. ಕೊನೆಗೆ 1724ರಲ್ಲಿ ನಿಜಾಮ್-ಉಲ್-ಮುಲ್ಕ್ ಆಸಫ್ ಝೂ ಸ್ವತಂತ್ರನಾದಾಗ ಈ ಪಟ್ಟಣ ಅವನ ರಾಜ್ಯಕ್ಕೆ ಸೇರಿತು. ಅನಂತರ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡು ಮುಂದೆ ಜಿಲ್ಲೆಯ ಮುಖ್ಯ ಪಟ್ಟಣವಾಗಿ ಮಾತ್ರ ಉಳಿಯಿತು. ಇಲ್ಲಿಯ ಕಟ್ಟಡಗಳು ಅರಮನೆಗಳು ಕ್ರಮೇಣ ನಶಿಸುತ್ತ ಬಂದವು.
ಬಿದರೆ ಒಂದು ಅನುಪಮ ಪ್ರೇಕ್ಷಣೀಯ ಸ್ಥಳ. ಈ ಪಟ್ಟಣದ ಸುತ್ತ ಅನೇಕ ನೀರಿನ ಝರಿಗಳಿರುವುದು ಒಂದು ವಿಶೇಷ. ಇಂಥವುಗಳಲ್ಲಿ ಒಂದಾದ ಪಾಪನಾಶಿನಿ ಪವಿತ್ರ ಕ್ಷೇತ್ರ. ಇಲ್ಲಿಯ ಬೃಹದಾಕಾರದ ಸ್ವಯಂಭೂ ಶಿವಲಿಂಗ ಯಾತ್ರಿಕರ, ಭಕ್ತರ ಮನಸ್ಸನ್ನು ಆಕರ್ಷಿಸುತ್ತದೆ. ಗುಹಾಂತರ ದೇವಾಲಯವೆಂದು ಪ್ರಸಿದ್ಧವಾದ ನರಸಿಂಹ ಝರಣಿ ಇನ್ನೊಂದು ಜಾಗೃತ ಕ್ಷೇತ್ರ. ನಾಡಿನ ನಾನಾ ಕಡೆಗಳಿಂದ ಇಲ್ಲಿಗೆ ಜನರು ಬರುತ್ತಾರೆ. ಗುಹೆಯಲ್ಲಿರುವ ನರಸಿಂಹ ದೇವರ ದರ್ಶನ ಮಾಡಲು ಎದೆ ಅಳತೆಯ ನೀರಿನಲ್ಲಿಯೇ ಹೋಗಬೇಕಾಗುವುದು ಇಲ್ಲಿಯ ಒಂದು ವಿಶೇಷ. ನೀರಿನ ಪಾತಳಿ ಎಲ್ಲ ಕಾಲದಲ್ಲಿಯೂ ಒಂದೇ ಪ್ರಮಾಣದಲ್ಲಿರುತ್ತದೆ. ಭಕ್ತರು ಈ ಕ್ಷೇತ್ರದಲ್ಲಿ ಅನೇಕ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಗುರುನಾನಕರು ಬಿದರೆಗೆ ಬಂದ ಒಂದು ಸಂದರ್ಭದಲ್ಲಿ ಅವರ ಪಾದಸ್ಪರ್ಶದಿಂದ ಚಿಮ್ಮಿ ಬಂದದ್ದೆನ್ನುವ ನಾನಕ್ ಝರಾ ಬಲು ಪ್ರಸಿದ್ಧ. ಸಿಖ್ ಜನರಿಗೆ ಪವಿತ್ರವಾದ ಈ ಸ್ಥಳದಲ್ಲಿ ಈಗ ಸುಂದರ ಕಟ್ಟಡಗಳು ನಿರ್ಮಾಣವಾಗಿವೆ. ಶುಕ್ರಾಚಾರ್ಯರು ಅನುಷ್ಠಾನ ಮಾಡಿದ ಸ್ಥಳವೆಂದು ಶುಕ್ಲತೀರ್ಥ ಪ್ರಸಿದ್ಧಿ ಪಡೆದಿದೆ. ಬಿದರೆಯಿಂದ 2 ಕಿಮೀ ದೂರದಲ್ಲಿರುವ ಅನಂತಶಯನ ಮಂದಿರದಲ್ಲಿರುವ ಅನಂತಶಯನ ದೇವರ ಮೂರ್ತಿ ಅನುಪಮ ಸುಂದರವಾಗಿದೆ. ಬಿದರೆಯಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರಗಳು ಹಲವಿದೆ. ಮುಲ್ತಾನಿ ಪಾಷಾ ದರ್ಗಾ, ಅಬುಲ್ ಫೈಜಾ ದರ್ಗಾ, ಅಷ್ಟೂರಿನ ಗುಂಬಜಗಳು ಅತ್ಯಂತ ಪ್ರಸಿದ್ಧವಾಗಿವೆ.

ಬಿದರೆಯಲ್ಲಿ ಅಳಿದುಳಿದಿರುವ ಅನೇಕ ಪ್ರಾಚೀನ ಕಟ್ಟಡಗಳು ಒಂದು ಕಾಲದಲ್ಲಿ ಈ ನಗರ ಮೆರೆದ ವೈಭವದ ಸ್ವರೂಪವನ್ನು ಕೆಲಮಟ್ಟಿಗೆ ಸಾರುತ್ತವೆ. ಬಿದರೆಯ ಕೋಟೆ ಈ ಪಟ್ಟಣದ ಬಲುಭಾಗವನ್ನು ಒಳಗೊಂಡಿದೆ. ಅನೇಕ ಹೆಬ್ಬಾಗಿಲು ಬುರುಜುಗಳಿಂದ ನಿರ್ಮಿತವಾಗಿರುವ ಈ ಕೋಟೆಯ ಸುತ್ತಲು ಹುಟ್ಟು ಬಂಡೆಯಲ್ಲಿಯೇ ಆಳವಾಗಿ ಅಗಲವಾಗಿ ಕೊರೆದ ಕಂದಕವಿದೆ. ಇವೆಲ್ಲ ಹೆಚ್ಚು ಕಡಿಮೆ ಸುಸ್ಥಿತಿಯಲ್ಲಿವೆ. ಆಹ್ಮದ್ ಷಾ 1429ರಲ್ಲಿ ಈ ಕೋಟೆಯ ನಿರ್ಮಾಣ ಕಾರ್ಯ ಆರಂಭಿಸಿ 1432ರಲ್ಲಿ ಪೂರೈಸಿದ. ಮಾಳವದ ಮಹಮ್ಮದ್ ಖಿಲ್ಜಿ ಒಮ್ಮೆ ನಾಶಮಾಡಿದ ಈ ಕೋಟೆಯನ್ನು ಮೊದಲಿದ್ದಂತೆಯೇ ನಿಜಾಮ ಷಾ (1461-63) ಮತ್ತೆ ಕಟ್ಟಿಸಿದ. ಅನಂತರ ಮಹಮ್ಮದ್ ಷಾನ ಕಾಲದಲ್ಲಿ (1463-82) ಮದ್ದಿನ ಬಳಕೆ ಹೆಚ್ಚಾದುದರಿಂದ ಅದಕ್ಕೆ ಅನುಗುಣವಾಗಿ ಕೋಟೆಯ ರಚನೆ ಬದಲಾವಣೆ ಹೊಂದಿ ಫಿರಂಗಿಗಳನ್ನು ಅಳವಡಿಸಿದುದಲ್ಲದೆ ಗೋಡೆಗಳನ್ನು ಮತ್ತಷ್ಟು ಭದ್ರಪಡಿಸಲಾಯಿತು. ಕೋಟೆಯ ಒಳಗಿರುವ ತಖ್ತ್ ಮಹಲ್ ಅಹ್ಮದ್ ಷಾ ಕಟ್ಟಿಸಿದ ಅರಮನೆ, ಈ ಅರಮನೆಯ ಮುಂದೆ ವಿಶಾಲವಾದ ಭವ್ಯ ಸಭಾಂಗಣವಿದ್ದು ಅಲ್ಲಿ ಸುಲ್ತಾನನ ಪ್ರಸಿದ್ಧವಾದ ಸಿಂಹಸನವಿರುತ್ತಿದ್ದುದರಿಂದ ಅದಕ್ಕೆ ಈ ಹೆಸರು ಬಂದಿದೆ. ಉನ್ನತವಾದ ಜಗತಿ, ಎತ್ತರವಾದ ಕಮಾನುಗಳು, ನಡುವೆ ವಿಸ್ತಾರವಾದ ಹಜಾರ, ಅದಕ್ಕೆ ಸೇರಿದಂತೆ ಹಿಂದೆ ಸುಲ್ತಾನನ ವಾಸದ ಕೊಠಡಿ, ಆ ಕೊಠಡಿಯ ಮೇಲೆ ಬುಡದಿಂದ ಸುಮಾರು 30 ಮೀ ಎತ್ತರವಾದ ಭವ್ಯವಾದ ಗುಮ್ಮಟ ಇವುಗಳಿಂದ ಕೂಡಿದ್ದ ಈ ಅರಮನೆ ತನ್ನ ಸೌಂದರ್ಯಕ್ಕೆ ಹೆಸರುಪಡೆದಿತ್ತು. ಸಭಾಂಗಣದ ಗೋಡೆಗಳಿಗೆ ಅತಿ ಸುಂದರವಾದ ಸೂಡು (ಎನ್‍ಕಾಷ್ಟಿಕ್) ಚಿತ್ರಗಳನ್ನುಳ್ಳ ಬಿಲ್ಲೆಗಳನ್ನು ಹಲವು ಬಣ್ಣಗಳಲ್ಲಿ ಆಕೃತಿಗಳಲ್ಲಿ ಜೋಡಿಸಿತ್ತು. ಗುಮ್ಮಟದ ಒಳಭಾಗದಲ್ಲಿ ಬಳ್ಳಿಗಳು, ರೇಖಾಕೃತಿಗಳು, ಮತ್ತು ಅಲಂಕಾರಾಕ್ಷರಗಳನ್ನು ಮನೋಹರವಾದ ರೀತಿಯಲ್ಲಿ ಬಿಡಿಸಿತ್ತು. ಈಗ ಕಟ್ಟಡದ ಅಧಿಕ ಭಾಗ ಬಿದ್ದು ಹೋಗಿದೆ. ಬಿದರೆಯಲ್ಲಿರುವ ಜಾಮಿ ಮಸೀದಿ ಮತ್ತು ಸೋಲಾ ಕಂಬ ಮಸೀದಿಗಳು ಇದೇ ಕಾಲದ ಉತ್ತಮ ನಿರ್ಮಾಣಗಳು.

ಬಿದರೆಯನ್ನು ರಾಜಧಾನಿಯಾಗಿ ಮಾಡಿಕೊಂಡ ಬಹಮನೀ ಅರಸ ಅಹ್ಮದ್ ಷಾನ ಗೋರಿ ಬಿದರೆಗೆ ಸೇರಿದಂತೆಯೇ ಇರುವ ಅಷ್ಟೂರಿನಲ್ಲಿದೆ. ಈ ಗೋರಿಯನ್ನು ಅಹ್ಮದನ ಮಗ 2ನೆಯ ಅಲಾಉದ್ದೀನ್ (1436-58) ಕಟ್ಟಿಸಿದ. 2ನೆಯ ಅಲಾಉದ್ದೀನನ ಗೋರಿ ಮತ್ತು ಹಜರತ್ ಖಲೀಉಲ್ಲಾನ ಗೋರಿ (ಚೌಖಂಡಿ) ಈ ಎರಡು ಕಟ್ಟಡಗಳೂ ಉನ್ನತ ಮತ್ತು ಭವ್ಯ ಆಗಿವೆ. ಇವುಗಳ ಗುಮ್ಮಟದ ಒಳಭಾಗದ ಗೋಡೆ ಮತ್ತು ಒಳಚಾವಣಿಗಳ ಮೇಲೆ ಕೊರೆದು ಬಿಡಿಸಿರುವ ಅತ್ಯಂತ ನವುರಾದ, ಚಿತ್ರವಿಚಿತ್ರವಾದ ಹೂಬಳ್ಳಿಗಳು ಮತ್ತು ರೇಖಾಕೃತಿಗಳು ಸುಂದರ ಪಟ್ಟಿಕೆಗಳು, ಬಣ್ಣ ಬಣ್ಣದ ಸೂಡು ಚಿತ್ರಗಳ ಬಿಲ್ಲೆಗಳು, ಅಳತೆಯರಿತು ನಿರ್ಮಿಸಿರುವ ಕಮಾನುಗಳು ಸುಂದರವಾಗಿದೆ. ಚೌಖಂಡಿಯೂ 2ನೆಯ ಅಲಾಉದ್ದೀನನ ಕಾಲದ್ದು. ಎತ್ತರವಾದ ಜಗತಿಯ ಮೇಲಿದ್ದು ಅಷ್ಟಮುಖವಾಗಿ ಉನ್ನತವಾಗಿ ಮೇಲೆದ್ದಿದೆ. ಅಲಾಉದ್ದೀನನ ಗೋರಿಯ ಕಮಾನುಗಳು ಮುಗಲ್ ರೀತಿಗೆ ಹತ್ತಿರವಾಗಿದೆ. ಈ ಗೋರಿಯ ಪಕ್ಕದಲ್ಲಿರುವ ಹುಮಾಯೂನನ (1458-61) ಗೋರಿಯ ಕಮಾನುಗಳು ಅಗಲವಾಗಿದ್ದು ಗುಲ್ಬರ್ಗಕೋಟೆಯಲ್ಲಿರುವ ಜಮ್ಮು ಮಸೀದಿಯ ಕಮಾನುಗಳನ್ನು ಹೋಲುತ್ತವೆ. ಈ ಕಟ್ಟಡದ ಹೊರಮುಖ 24ಮೀ ಚೌಕವಿದೆ. ಗೋಡೆಗಳು ಕರಿಯ ಗಟ್ಟಿ ಕಲ್ಲಿನಿಂದ ನಿರ್ಮಿತವಾಗಿದ್ದು 7ಮೀ ದಪ್ಪ ಆಗಿವೆ. ಗುಮ್ಮಟವನ್ನು ನೀರಿನಲ್ಲಿ ತೇಲುವ ಹಗುರ ಇಟ್ಟಿಗೆಗಳಿಂದ ಕಟ್ಟಲಾಗಿದೆ.

ಗುಂಬಜ್ ದರ್ವಾಜಾಕ್ಕೆ ಹೊಂದಿಕೊಂಡಂತೆ ಇರುವ ಷಾ ಬುರುಜು ಮಹಮ್ಮದ್ ಷಾನ ಕಾಲದ್ದು. ಅವನು ಕೊಲೆಯ ಸಂಚೊಂದರಿಂದ ಪಾರಾಗಿದ್ದರ ನೆನಪಿಗಾಗಿ ಇದನ್ನು ಕಟ್ಟಿಸಿದ. ಮಹಮ್ಮದ್ ಷಾನ ಗೋರಿ ಸಹ ದೊಡ್ಡ ಕಟ್ಟಡ.
ಪಟ್ಟಣದ ಮಧ್ಯದಲ್ಲಿರುವ ಪ್ರಸಿದ್ಧವಾದ ಮಹ್ಮೂದ್ ಗಾವಾನನ ಮದರಸಾ ಭಾರತದಲ್ಲಿಯೇ ಒಂದು ಅಪರೂಪ ಕಟ್ಟಡ. ಪರ್ಷಿಯಾ ದೇಶದ ಮದರಸಾಗಳ ಮಾದರಿಯಲ್ಲಿರುವ ಈ ಕಟ್ಟಡ ವಿಶಾಲವಾದುದಾಗಿತ್ತು. ಇದು ನಡುವೆ ಪ್ರಾಂಗಣ; ಮತ್ತು ಸುತ್ತಲೂ ತರಗತಿಯ ಕೋಣೆಗಳು, ವಿದ್ಯಾರ್ಥಿಗಳ ಕೋಣೆ ಇತ್ಯಾದಿಗಳೊಡನೆ ಮೂರಂತಸ್ತಿನಲ್ಲಿ ಮೇಲೆದ್ದಿರುವ ಕಟ್ಟಡ. ಇದರ ಎರಡು ಕಡೆಯೂ ಉನ್ನತವಾದ ಮಿನಾರುಗಳಿದ್ದವು. ಈ ಕಟ್ಟಡದ ಮುಕ್ಕಾಲು ಭಾಗ ಈಗ ಬಿದ್ದು ಹೋಗಿದೆ. ಮಿನಾರಿನ ಮೇಲೆ ಬಗೆಬಗೆಯ ರೀತಿಯಲ್ಲಿ ಬಣ್ಣ ಬಣ್ಣದ ಸೂಡು ಚಿತ್ರಗಳ ಬಿಲ್ಲೆಗಳಿದ್ದ ಕುರುಹನ್ನು ಈಗಲೂ ಕಾಣಬಹುದು.

ಬಹಮನೀ ಅರಸರ ಕಾಲದ ಈ ಮೇಲಿನ ಕಟ್ಟಡಗಳೆಲ್ಲ ಅವರ ಆಳ್ವಿಕೆಯಲ್ಲಿ ಇಲ್ಲಿ ಬೆಳೆದ ಹಿಂದು ಮುಸ್ಲಿಂ ವಾಸ್ತು ರೀತಿಯ ಉತ್ತಮ ಉದಾಹರಣೆಗಳಾಗಿವೆ. ಇವುಗಳಲ್ಲಿ ಸ್ಥೂಲತೆ ಎದ್ದು ಕಾಣುತ್ತದೆ. ಅತಿ ದಪ್ಪವಾಗಿ ಭಾರವಾಗಿರುವಂತೆ ಭಾಸವಾಗುತ್ತದೆ. ಇವುಗಳಲ್ಲಿ ಅನೇಕ ಬಗೆಯ ಕಮಾನುಗಳನ್ನು ಉಪಯೋಗಿಸಲಾಗಿದೆ. ಬಣ್ಣ ಬಣ್ಣದ ಚಿತ್ರ ಕೆಲಸಗಳಿಗೆ ಹೆಚ್ಚು ಪ್ರಾಮುಖ್ಯ ಕೊಡಲಾಗಿದೆ. ಸೂಡು ಚಿತ್ರಗಳ ಬಿಲ್ಲೆಗಳನ್ನು ಹೇರಳವಾಗಿ ವಿನಿಯೋಗಿಸಲಾಗಿದೆ. ಅಲಂಕರಣಕ್ಕೆ ಹಿಂದೂ ರೀತಿಯನ್ನು ಹೆಚ್ಚಾಗಿ ಬಳಸಲಾಗಿದೆ.

ಬರೀದ್‍ಶಾಹೀ ಸುಲ್ತಾನರರು ಬಿದರೆಯಲ್ಲಿ ಸ್ವತಂತ್ರರಾಗಿ ಆಳಲಾರಂಭಿಸಿದ ಮೇಲೆ ಕಟ್ಟಡಗಳ ನಿರ್ಮಾಣದ ರೀತಿಯಲ್ಲಿ ನಿರ್ದಿಷ್ಟವಾದ ಬದಲಾಣೆಗಳಾದುವು. ಆಲಿ ಬರೀದ್ ಕಟ್ಟಿಸಿದ ಕಟ್ಟಡಗಳಲ್ಲಿ ರಂಗೀನ್ ಮಹಲ್ ಮತ್ತು ಅವನು ತನಗಾಗಿ ಕಟ್ಟಿಸಿಕೊಂಡ ಗೋರಿ (1577) ಮುಖ್ಯವಾದುವು. ಬಣ್ಣ ಬಣ್ಣದ ಬಿಲ್ಲೆಗಳಿಂದ ಅಲಂಕೃತವಾಗಿದ್ದುದರಿಂದ ಅವನ ಅರಮನೆಗೆ ರಂಗೀನ್ ಮಹಲ್ ಎಂದು ಹೆಸರು ಬಂದಿತು. ಈ ಅರಮನೆಯ ಮುಖ್ಯ ಆಕರ್ಷಣೆಯೆಂದರೆ ಇದರರಲ್ಲಿರುವ ಸುಂದರವಾದ ಅತ್ಯಂತ ನಾಜೂಕಿನ ಮರದ ಕೆತ್ತನೆ ಮತ್ತು ಚಿತ್ರಗಳಿಗೆ ಧಾರಾಳವಾಗಿ ಬಳಸಿರುವ ಮುತ್ತಿನ ಚಿಪ್ಪುಗಳು. ಆದರೆ ಅದರಲ್ಲಿ ವಿಸ್ತಾರ ಅಥವಾ ಭವ್ಯತೆಯ ಅಭಾವ ಎದ್ದುಕಾಣುತ್ತದೆ. ಅದರಲ್ಲಿ ಮುಖ್ಯ ಹಜಾರ, ಅದರ ಪಕ್ಕಗಳಲ್ಲಿ ಎರಡೆರಡು ಮತ್ತು ಹಿಂದೆ ನಾಲ್ಕು ಕೋಣೆಗಳು ಇವೆ. ಮಧ್ಯದ ಹಜಾರದ ನಾಲ್ಕು ಕಂಬಗಳು ಅತಿ ಸೂಕ್ಷ್ಮವಾದ ಕೆತ್ತನೆಯಿಂದ ಕೂಡಿದೆ. ಆಲಿ ಬರೀದನ ಗೋರಿಯು ಮೇಲಿನ ಗುಮ್ಮಟ ಕಟ್ಟಡದ ಗಾತ್ರಕ್ಕೆ ತುಂಬ ದೊಡ್ಡದಾಗಿದ್ದು ಭಾರವಾಗಿರುವಂತೆ ಭಾಸವಾಗುತ್ತದೆ. ಕಟ್ಟಡ ಬಹುಮನೀ ಸುಲ್ತಾನರ ಗೋರಿಗಳಂತೆ ಸ್ಥೂಲವಾಗಿ ಮೊದ್ದು ಮೊದ್ದಾಗಿಲ್ಲದೆ ಅದರಲ್ಲಿ ನಾಜೂಕಿನ ಶಿಲ್ಪವನ್ನು ಕಾಣಬಹುದು. ಚೌಕಾಕೃತಿಯ ಕಟ್ಟಡದ ನಾಲ್ಕು ಕಡೆಯೂ ತೆರೆದ ಕಮಾನುಗಳಿದ್ದು ಮಂಟಪದಂತೆ ಕಾಣುವ ಅದರ ಹೊರಗೊಡೆಯ ಮೇಲಿನ ಪಟ್ಟಿಕೆಗಳ ಅಲಂಕರಣದಲ್ಲಿ ಮಧ್ಯದ ಗುಮ್ಮಟದ ಅನುಕರಣೆ ಇರುವುದು ಹಿಂದೂ ಶೈಲಿಯ ಪ್ರಭಾವವನ್ನು ಸೂಚಿಸುತ್ತದೆ. ಈ ಊರಿನಲ್ಲಿರುವ ಕಾಲಿ ಮಸೀದಿ ಈ ಕಾಲದ ಚಿಕ್ಕದಾದ ಸುಂದರವಾದ ಕಟ್ಟಡ. ಕರಿಯ ಕಲ್ಲಿನಿಂದ ಕಟ್ಟಿರುವುದರಿಂದ ಈ ಹೆಸರು ಬಂದಿದೆ. ಬಿದರೆ ಆದಿಲ್ ಶಾಹಿಗಳಿಗೆ ಸೇರಿಹೋದ ಮೇಲೆ ಇಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಪ್ರೋತ್ಸಾಹ ದೊರೆಯಲಿಲ್ಲ. ಹಜರತ್ ಮಕಾನ್ ಖಾದ್ರಿ ದರ್ಗಾ ಖುಬಾರಿ ಮಸೀದಿಯಂತಹ ಕೆಲವು ಕಟ್ಟಡಗಳು ಈ ಕಾಲದಲ್ಲಿ ನಿರ್ಮಿತವಾದುವಾದರೂ ಅವುಗಳಿಗೆ ಯಾವ ಪ್ರಾಮುಖ್ಯವೂ ಇಲ್ಲ.

ಮುಗಲರ ಆಳ್ವಿಕೆಯಲ್ಲಿ ಕೋಟೆಯನ್ನು ಭದ್ರಪಡಿಸಿದುದಲ್ಲದೆ ಕೆಲವು ಮಸೀದಿಗಳನ್ನು ಕಟ್ಟಲಾಯಿತು. ಝರಣಿ ನರಸಿಂಹ ಕ್ಷೇತ್ರದ ಬಳಿ ಇರುವ ಮಸೀದಿ ಅಂಥವುಗಳಲ್ಲೊಂದು. ಔರಂಗಜೇಬ್ ಇದನ್ನು ಕಟ್ಟಿಸಿದ. ಬಿದರೆಯಲ್ಲಿ ಮುಗಲ ಅಧಿಕಾರಿಯಾಗಿದ್ದ ಹುಸಾಮುದ್ದೀನ್ ಖಾನನ ಕಾಲದಲ್ಲಿ ಒಂದು ಮಸೀದಿ ಮತ್ತು ಚಾಂದಿನೀ ಚಬೂತರಗಳನ್ನು ಕಟ್ಟಲಾಯಿತು. ಆದರೆ ಈ ಕಾಲಕ ಕಟ್ಟಡಗಳು ಕಲೆಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿಲ್ಲ.							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ